बुधवार, 14 दिसंबर 2022

ಜರ್ಮನಿಯಲ್ಲಿ ಕನ್ನಡ ರಾಜ್ಯೋತ್ಸವ

ನಮ್ಮ ನಾಡು ನುಡಿಯ ಬಗ್ಗೆ ತಾಯ್ನಾಡಿನಲ್ಲಿ ಇರುವವರಿಗೆ ಎಷ್ಟು ಅಭಿಮಾನವಿರುತ್ತದೆಯೋ, ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ತಾಯ್ನಾಡಿನಿಂದ ಸಾವಿರಾರು ಮೈಲಿಗಳು ದೂರವಿರುವವರಿಗೆ ಇರುತ್ತದೆ ಎಂದರೆ ಖಂಡಿತ ಉತ್ಪ್ರೇಕ್ಷೆಯಾಗಲಾರದು..

ಉದ್ಯೋಗವನ್ನರಸಿಯೋ, ವಿದ್ಯಾಭ್ಯಾಸಕ್ಕಾಗಿಯೋ ಅಥವಾ ತಮ್ಮದೇ ಕಾರಣಗಳನ್ನಿಟ್ಟುಕೊಂಡು ದೇಶವನ್ನು ಬಿಟ್ಟು ವಿದೇಶದಲ್ಲಿ ನೆಲೆಸಿರುವವರು ತಮ್ಮ ದೇಶ,ತಮ್ಮ ಭಾಷೆ,ರಾಜ್ಯ,ಉಡುಗೆ ತೊಡುಗೆ,ಊಟ,ಆಚರಣೆ ಎಲ್ಲವನ್ನೂ ಎಷ್ಟು ಮಿಸ್ ಮಾಡಿಕೊಳ್ತಾರೆ...ಎಲ್ಲಾ ಇದ್ದೂ ಏನೋ ಕೊರತೆ ಕಾಡುತ್ತಿರುತ್ತದೆ..
ಅದೇ "ನಮ್ಮವರು ಅನ್ನೋರು ಇಲ್ಲ" ಅನ್ನೋ ಭಾವ.. ಇಂತಹ ಸಹ ಮನಸ್ಥಿತಿಯವರೆಲ್ಲರೂ ಸೇರಿ ಕಟ್ಟಿದಂತಹ ಗುಂಪು "ಮ್ಯೂನಿಕ್ ಕನ್ನಡಿಗರು".

ಈ ಗುಂಪಿನ ವತಿಯಿಂದ ಕಳೆದವಾರ ನವಂಬರ್ 19ನೇ ತಾರೀಖು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಿಂದ ಆಚರಿಸಲಾಯಿತು...

ಕನ್ನಡದ ಮೇರು ನಟ ದಿ.ಪುನೀತ್ ರಾಜ್'ಕುಮಾರ್ ಅವರಿಗೆ ಅರ್ಪಿಸಿದ ಈ ಕಾರ್ಯಕ್ರಮವನ್ನು ವೀಕ್ಷಿಸಲು ಸುಮಾರು 680ಕ್ಕೂ ಹೆಚ್ಚು ಜನರು ಸೇರಿದ್ದರು...
ಮಕ್ಕಳು,ದೊಡ್ಡವರು ಎಂಬ ಭೇದವಿಲ್ಲದೆ ಎಲ್ಲರೂ ಶ್ರದ್ದೆಯಿಂದ ಭಾಗವಹಿಸಿದ್ದು
ನೂರಾರು ಕಾರ್ಯಕರ್ತರ ನೂರೈವತ್ತಕ್ಕೊ ಹೆಚ್ಚು ಪ್ರದರ್ಶಕರ ಶ್ರಮಕ್ಕೆ ಸಿಕ್ಕ ಪ್ರತಿಫಲ....

ಪ್ರಾರ್ಥನೆ ಗೀತೆಯಿಂದ ಆರಂಭವಾದ ಕಾರ್ಯಕ್ರಮ,ರಾಷ್ಟಗೀತೆ,ನಾಡಗೀತೆ, ಯುಗಳ ಗೀತೆ,ಭರತನಾಟ್ಯ, ಗೊಂಬೆಯಾಟ, ಅಷ್ಟೇ ಅಲ್ಲ ವೀಣಾ ವಾದನ,ಪಿಯಾನೋ,ಗಿಟಾರ್ ಮುಂತಾದವುಗಳನ್ನೊಳಗೊಂಡಿತ್ತು..

ಇವೆಲ್ಲಕ್ಕೂ ಕಳಶವಿಟ್ಟಂತೆ ಪವನ್ ಪ್ರಸಾದ್ ರವರ  "ಡಿ ಫಾರ್ ಡ್ಯಾನ್ಸ್" ನೇತೃತ್ವದಲ್ಲಿ  ಜರ್ಮನ್ ಕಲಾವಿದರನ್ನೂ ಒಳಗೊಂಡ   "ನಾನು ಕಂಡ ಕರುನಾಡು" ಎಂಬ ಕಾರ್ಯಕ್ರಮ...

ಟಿಮ್ ಮತ್ತು ಮೋನಾ ಎಂಬ ಜರ್ಮನ್ ದಂಪತಿಗಳು ಭಾರತಕ್ಕೆ ಬಂದು,ಕರ್ನಾಟಕದಿಂದ ಹೊರಡುವ ದಿನ ಫ್ಲೈಟ್ ಮಿಸ್ ಆಗಿ, ಇಲ್ಲಿ ಏನು ಮಾಡುವುದು?ಹೇಗೆ ಕಾಲ ಕಳೆಯುವುದು ಎಂದು ತಲೆ ಮೇಲೆ ಕೈ ಹೊತ್ತುಕೊಂಡು ಕೂತಾಗ ಅಲ್ಲಿ ಅವರಿಗೆ ಸಿಕ್ಕ "ರಾಜ್"ಎನ್ನುವ ಪುನೀತ್ ಅಭಿಮಾನಿ, ಇಡೀ ಕರ್ನಾಟಕದ ದರ್ಶನವನ್ನು "ಹಾಡು,ನೃತ್ಯ,ಸಣ್ಣ ಸಣ್ಣ ನಾಟಕ"ದ ಮೂಲಕ ಅವರಿಗೆ ಮಾಡಿಸುತ್ತಾನೆ...

ಈ ಕಾರ್ಯಕ್ರಮ ಸರಿ ಸುಮಾರು ನೂರು ಕಲಾವಿದರನ್ನೊಳಗೊಂಡು  ೨ಗಂಟೆಗಳ ಕಾಲ ಅದ್ಭುತವಾಗಿ ಮೂಡಿ ಬಂದಿತ್ತು..
ಇಲ್ಲಿ ಹೇಗಪ್ಪಾ ಕಾಲ ಕಳೆಯುವುದು ಎಂದು ದಿಕ್ಕೆಟ್ಟಿದ್ದ ದಂಪತಿಗಳು ಕರ್ನಾಟಕ ಹೆಮ್ಮೆಯ ಡೊಳ್ಳು ಕುಣಿತ,ಬೆಂಗಳೂರಿನ ಕರಗ,ಮೈಸೂರು ದಸರಾ,ಉಡುಪಿಯ ಹುಲಿವೇಷ, ಕೊಡಚಾದ್ರಿಯ ಕಾಡು,ಕೊಡವರ ಸಂಸ್ಕೃತಿ,ಉತ್ತರ ಕರ್ನಾಟಕದ ಸತ್ಕಾರ,ಹವ್ಯಕರ ಊಟ,ಬೀಸು ಕಂಸಾಳೆ ಎಲ್ಲವನ್ನೂ ಕಂಡು ಬೆರಗಾಗುತ್ತಾರೆ..

ಕೊನೆಗೆ ಕರ್ನಾಟಕದ ಸಂಸ್ಕೃತಿಗೆ ಮನಸೋತು ಮೋನಾ,ಕನ್ನಡಿಗರ ಸಾಂಪ್ರದಾಯಿಕ ಉಡುಗೆ ತೊಟ್ಟು ಘಲ್ಲು ಘಲ್ಲೆನುತಾವ್ ಗೆಜ್ಜಿ "ಹಾಡನ್ನು ಸ್ವತಃ ಹಾಡಿಕೊಂಡು ನೃತ ಮಾಡುತ್ತಾಳೆ"..

ದಿವ್ಯಮೌನದಿಂದ  ಈ ಅಮೋಘ ದೃಶ್ಯಾವಳಿಯನ್ನು ವೀಕ್ಷಿಸುತ್ತಿದ್ದ ಜನರಿಗೆ  ತಾವು ಇಷ್ಟು ಹೊತ್ತೂ ಕರ್ನಾಟಕದಲ್ಲೇ ಇದ್ದೇವೇನೋ ಎನ್ನುವಂಥ ಭಾಸ.....

ಹಲವು ತಿಂಗಳುಗಳು ಹಗಲು ರಾತ್ರಿ ಎನ್ನದೇ ಅಭ್ಯಾಸ ಮಾಡಿ,ಕಾರ್ಯಕ್ರಮವನ್ನು ಯಶಸ್ವಿ ಯಾಗುವಂತೆ ದುಡಿದ ಎಲ್ಲರಿಗೂ ಅದೊಂದು ಸಾರ್ಥಕ ಕ್ಷಣ...

ತಮ್ಮ ಮಕ್ಕಳ ಭೇಟಿಗಾಗಿ ಭಾರತದಿಂದ ಬಂದಿದ್ದ ಹಲವು ಪಾಲಕರು ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಿದರು..
ಅದ್ದೂರಿಯಾಗಿ ಆರಂಭಗೊಂಡು ಸುಮಾರು ಹತ್ತು ಗಂಟೆಗಳ ಕಾಲ ನಡೆದ ಕಾರ್ಯಕ್ರಮ ಊಟದೊಂದಿಗೆ ಮುಕ್ತಾಯಗೊಂಡಿತು..
ನೆರೆದಿದ್ದವರ ಮನಸೂರೆಗೊಂಡ ಇಂತಹ ಹಲವಾರು ಕಾರ್ಯಕ್ರಮಗಳು ಮ್ಯೂನಿಕ್ ಕನ್ನಡಿಗರ ವತಿಯಿಂದ ನಡೆಯಲಿ ಎಂದು ಆಶಯಿಸೋಣ

ಪೃಥ್ವಿ ಉದಯ್
ಮ್ಯೂನಿಕ್,ಜರ್ಮನಿ