शुक्रवार, 4 नवंबर 2022

ಸುಲಭಸಾಧ್ಯವಲ್ಲ

ಕನಸು ಕಾಣುವುದು ಮಾನವನ ಸಹಜ ಗುಣ. ಒಳ್ಳೆಯ ವಿದ್ಯಾಭ್ಯಾಸ ಹೊಂದುವುದು, ಉತ್ತಮ ನೌಕರಿ ಬಯಸುವದು, ಸರ್ವಗುಣ ಸಂಪನ್ನ ಸಂಗತಿಯನ್ನು ಹೊಂದುವುದು, ಬುದ್ಧಿವಂತ ಗುಣವಂತ ಮಕ್ಕಳನ್ನು ಆಶಿಸುವುದು, ಹೀಗೆ ಮಾನವನ ಕನಸುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಒಂದು ಸ್ಥಿರವಾದ ಉದ್ಯೋಗ ದೊರೆತ ನಂತರ ಈ ಪಟ್ಟಿಗೆ ಇನ್ನೊಂದು ಕಾಣದು ಸೇರ್ಪಡೆಯಾಗುತ್ತದೆ. ಅದುವೇ ಒಂದು ಸಕಲಸೌಕರ್ಯಗಳಿಂದ ಕೂಡಿದ ಒಂದು ಸ್ವಂತ ಮನೆ ಹೊಂದುವುದು. ಈ ಕನಸಿನ ಈಡೇರಿಕೆ ಅಷ್ಟು ಸುಲಭಸಾಧ್ಯವಲ್ಲ. ಅದಕ್ಕೆ ನಮ್ಮ ಪೂರ್ವಜರು 'ಮನೆ ಕಟ್ಟಿನೊಡು ಮಾಡುವೆ ಮಾಡಿ ನೋಡು' ಎಂದು ತುಂಬಾ ಅರ್ಥಗರ್ಭಿತವಾಗಿ ಹೇಳಿದ್ದಾರೆ.  

ಇಂತಹ ಕನಸನ್ನು ವಿದೇಶದಲ್ಲಿ ನನಸಾಗಿಸಿಕೊಳ್ಳುವದು ತುಂಬಾ ಮೆಚ್ಚುಗೆಯ ವಿಷಯವೇ ಸರಿ. ಇಂತಹ ಸಾಧನೆ ಜರ್ಮನಿಯಲ್ಲಿ  ಮಾಡಿದ ನಮ್ಮ ಮಿತ್ರವೃಂಗದಲ್ಲಿ ಶ್ರೀಮತಿ ರಶ್ಮಿ ಮತ್ತು ಶ್ರೀ ಕೀರ್ತಿರಾಜ ಪಾಟೀಲ ದಂಪತಿಗಳು ಕೂಡ ಒಬ್ಬರು. ಅವರ ಮನೆಯ ಗೃಹಪ್ರವೇಶದ ಕಾರ್ಯಕ್ರಮವನ್ನು ಎಲ್ಲರಂತೆ ಹತ್ತರಲ್ಲಿ ಹನ್ನೊಂದು ಎನ್ನುವಂತೆ ಮಾಡದೇ ವಿಶಿಷ್ಟ ರೀತಿಯಲ್ಲಿ ಮಾಡಿದ್ದೆ ಈ ಲೇಖನಕ್ಕೆ ಕಾರಣ ಎಂದರೆ ತಪ್ಪಿಲ್ಲ.

ಈ ತರಹದ ದೇವತಾಕಾರ್ಯಗಳನ್ನ ಜರ್ಮನಿಯಲ್ಲಿ ನೆರವೇರಿಸಬಹದು ಎಂಬ ಊಹೆಯು ಯಾರಿಗೂ ಇರಲಿಕ್ಕಿಲ್ಲ , ಕಾರಣ ಇಲ್ಲಿ ಹಿಂತಹ ಕಾರ್ಯಕ್ರಮಗಳಿಗೆ ಬೇಕಾಗುವ ಮೂಲ ಸಂಪನ್ಮೂಲಗಳ ಕೊರತೆ. ಆದರೆ ಪಾಟೀಲ ದಂಪತಿಗಳ ಕೂಲಂಕುಷವಾದ ಯೋಜನೆಗಳಿಂದ ಇಂತಹ ವಂದು ಬಹಳ ಅಪರೂಪದ ಗೃಹಪ್ರವೇಶಕ್ಕೆ ನಾವು ಸಾಕ್ಷಿಯಾದೆವು.

ಗೃಹಪ್ರವೇಶಕ್ಕೆ ಶ್ರೀಯುತ ವೀರಭದ್ರಯ್ಯ ಹಿರೇಮಠ ಎಂಬ ಸ್ವಾಮಿಗಳನ್ನು ನಮ್ಮ ಭಾರತದಿಂದ ಕರೆಯಿಸಿ ತುಂಬಾ ಸಂಪ್ರದಾಯಕವಾಗಿ ನವಗ್ರಹ ಪೂಜೆ, ಹೋಮ, ಶ್ರೀ ಸತ್ಯನಾರಾಯಣ ಪೂಜೆ,  ಶ್ರೀ ವರದಾಶಂಕರ  ಹಾಗೂ ಮಹಾಲಕ್ಷ್ಮಿ ಪೂಜೆಗಳನ್ನು ಮೂರು ದಿವಸಗಳ ಕಾಲ ವಿಜೃಂಭಣೆಯಿಂದ ತಮ್ಮ ಆಪ್ತಮಿತ್ರವರ್ಗದವರೊಂದಿಗೆ  ಆಚರಿಸಿದರು.  ದೇವರ ಅಲಂಕಾರ, ಮನೆಯ ಅಲಂಕಾರಗಳನ್ನು ನೋಡಲು ಎರಡು   ಕಣ್ಣುಗಳು ಸಾಲದಾಗಿದ್ದವು . ಮನೆಯಲ್ಲ ಕೆಂಪು ಹಳದಿ ಹೂವುಗಳು ಹಾಗು ದೀಪಗಳಿಂದ ಅಲಂಕೃತವಾಗಿತ್ತು. ಬಾಗಿಲಲ್ಲಿ ಮನಸೆಳೆಯುವ  ರಂಗೋಲಿಯ ಚಿತ್ತಾರ ಮನೆಸೂರೆಗೊಂಡಿತ್ತು.  ಅಷ್ಟೇ ಅಲ್ಲದೆ ನೆರೆಹೊರೆಯ ಜರ್ಮನ್ ಕುಟುಂಬದವರು ಪೂಜಾ ಕಾರ್ಯಕ್ರಮಗಳನ್ನು ಮುಗಿಯುವವರೆಗೂ ಕುಳಿತುಕೊಂಡು ವೀಕ್ಷಣೆ ಮಾಡಿದ್ದೂ ನಿಜಕ್ಕೂ ಅಚ್ಚರಿಯಾಗಿತ್ತು.

ಇದಕ್ಕೆಲ್ಲ ಕಳಸವಿಟ್ಟಂತೆ ಭಾರತೀಯ ಶೈಲಿಯ ಪುಷ್ಕಳವಾದಂತಹ ಭೋಜನ ಇನ್ನೂ ನೆನಪಿನಲ್ಲಿ ಉಳಿಯಯುವಂತಾಗಿದೆ. ನಾವಷ್ಟೇ ಅಲ್ಲದೆ ಜರ್ಮನಿಯ ನಾಗರಿಕರೂ ಕೂಡ ರುಚಿಯಾದ ಭೋಜನವನ್ನು ಸಂತೃಪ್ತಿಯಿಂದ ಸವಿದರು. ಗೃಹಪ್ರವೇಶದ ಸಮಾರಂಭಕ್ಕೆಂದೇ ಭಾರತದಿಂದ ಬಂದಿಳಿದ ಶ್ರೀಮತಿ ರಶ್ಮಿಯವರ ಮಾತಾಪಿತೃರ ಮಾರ್ಗದರ್ಶನದಲ್ಲಿ ನಡೆದ ಪೂಜಾ ವಿಧಿವಿಧಾನಗಳಲ್ಲಿ ಎಳ್ಳಷ್ಟೂ ನ್ಯೂನ್ಯತೆಗಳಾಗಲಿಲ್ಲ. ಅವರ ತಾಯಿಯವರು ತಯಾರಿಸಿದ ಚಕ್ಕುಲಿ, ಕರ್ಚಿಕಾಯಿ, ಅವಲಕ್ಕಿ ಇತ್ಯದಿ ತಿಂಡಿತಿನುಸುಗಳ ರುಚಿಯಂತೂ ಬಾಯಿ ಚಪ್ಪರಿಸುವಂತಿತ್ತು. ನಮಗೆಲ್ಲ ಭಾರತದಲ್ಲಿದ್ದು ಮನೆಯಲ್ಲಿಯೇ ಹಬ್ಬ ಆಚರಿಸಿದ ಅನುಭವ ಇನ್ನು ಮನದಾಳದಲ್ಲಿ ಹಸಿರಾಗಿದೆ.

'ಪರಸ್ಥಳ ಪ್ರಾಣಸಂಕಟ' ಎಂಬ ಗಾದೆಯಿರುವಾಗ ಪ್ರದೇಶವಾದ ಜರ್ಮನಿಯಲ್ಲಿ ಕೂಡ ನಮ್ಮ ಸಂಸ್ಕೃತಿಗನುಗುಣವಾಗಿ ಸಕಲ ವಿಧಿವಿಧಾನಗಳೊಂದಿಗೆ 'ಗೃಹಪ್ರವೇಶ' ಮಾಡಬಹದು ಎಂಬುದನ್ನು ತೋರಿಸಿಕೊಟ್ಟ ಪಾಟೀಲ ದಂಪತಿಗಳಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ.  ಇಂತಹ ಶುಭಕಾರ್ಯಗಳು  ಮತ್ತೆ ಜರ್ಮನಿಯಲ್ಲಿ ನಡೆಯಲಿ, ನಮಗೆ ಪಾಲ್ಗೊಳ್ಳುವ ಅವಕಾಶ ಸಿಗಲಿ ಎಂಬ ಹಾರೈಕೆಗಳೊಂದಿಗೆ .. 

- ಪಾಟೀಲ ದಂಪತಿಗಳ ಮಿತೃಬಾಂಧವರು.